	ಈತಿ ಎಂಬ ಪದಕ್ಕೆ ಬಾಧೆ ಎಂದು ಅರ್ಥ. ಆದರೂ ಬಳಕೆಯಲ್ಲಿರುವ ಪದ ಈತಿ ಬಾಧೆಗಳು ಎಂದೇ. ಬಾಧೆಗಳು ಸ್ಥೂಲವಾಗಿ ಎರಡು ಬಗೆಯವು. ಬಾಧೆಗಳಿಗೆ ನಾವೇ ನೇರವಾಗಿ ಕಾರಣವಾಗಬಹುದು ಅಥವಾ ನಾವಿರುವ ಹೊರಸನ್ನಿವೇಶದಲ್ಲಿ ಉಂಟಾಗುವ ಬದಲಾವಣೆಗಳು ಕಾರಣಗಳಾಗಬಹುದು. ಈತಿ ಬಾಧೆಗಳು ಸನ್ನಿವೇಶದಲ್ಲಿ ಸಂಭವಿಸುವ ಬದಲಾವಣೆಗಳಿಂದ ಹುಟ್ಟುವಂಥವು. ಸಾಮಾನ್ಯವಾಗಿ ಇವುಗಳನ್ನು ಷಡ್ಬಾಧೆಗಳೆಂದು ಕರೆಯುವುದುಂಟು: ಅತಿವೃಷ್ಟಿ, ಅನಾವೃಷ್ಟಿ, ಪ್ರಾಣಿಗಳಿಂದ ಆಗುವ ಕಷ್ಟನಷ್ಟಗಳು, ಪಕ್ಷಿಗಳಿಂದಾಗುವ ಕಷ್ಟನಷ್ಟಗಳು, ಕೀಟಗಳಿಂದ ಆಗುವ ಕಷ್ಟನಷ್ಟಗಳು, ಸೈನ್ಯದಿಂದ ಆಗುವ ಪೀಡೆಗಳು. 

	ಅತಿವೃಷ್ಟಿಯಿಂದ ನದಿಗಳಲ್ಲಿ ಪ್ರವಾಹ ಹೆಚ್ಚಿ ನೂರಾರು ಕಿ.ಮೀ.ಗಳಷ್ಟು ವಿಸ್ತಾರವಾಗಿ ಹರಡಿ ಅಲ್ಲಿನ ನಿವಾಸಿಗಳು ಸಾಯಬಹುದು. ಮನೆ ಮಠಗಳು ಕೊಚ್ಚಿ ಹೋಗಬಹುದು, ನೂರಾರು ಎಕರೆಗಳ ಬೆಳೆ ನಷ್ಟವಾಗಬಹುದು, ಸಾವಿರಾರು ದನಕರುಗಳು ಪ್ರವಾಹಕ್ಕೆ ಸಿಕ್ಕಿ ಸಾಯಬಹುದು. ಉತ್ತರ ಭಾರತದಲ್ಲಿ ಬ್ರಹ್ಮಪುತ್ರಾ ಮತ್ತು ಕೋಸಿ ನದಿಗಳು ಅತಿವೃಷ್ಟಿಯಿಂದ ಉಬ್ಬಿ ಉಂಟು ಮಾಡುವ ಅನಾಹುತಗಳನ್ನು ಇಲ್ಲಿ ಸ್ಮರಿಸಬಹುದು.

	ಅನಾವೃಷ್ಟಿಯಿಂದ, ಅಂದರೆ ಮಳೆಯ ಅಭಾವದಿಂದ ಬಿತ್ತಿದ ಬೆಳೆ ಸುಟ್ಟು ಹೋಗಿ ಕ್ಷಾಮ ಉದ್ಭವಿಸಬಹುದು. ಹಿಂದೆ ಧಾತು, ಈಶ್ವರ ಸಂವತ್ಸರಗಳಲ್ಲಿ ಮಳೆ ಇಲ್ಲದೆ ಕರ್ಣಾಟಕದಲ್ಲಿ ಸಾವಿರಾರು ಮಂದಿ ಸತ್ತುಹೋದರು. ತಿನ್ನುವುದಕ್ಕೆ ಮೇವಿಲ್ಲದೆ ಕುಡಿಯುವುದಕ್ಕೆ ನೀರಿಲ್ಲದೆ ಲಕ್ಷಾಂತರ ಜಾನುವಾರುಗಳು ನಷ್ಟವಾದುವು.

	ಪ್ರಾಣಿಗಳಿಂದ ಆಗುವ ನಷ್ಟಕ್ಕೆ ಇಲಿಗಳ ಉಪಟಳ ಒಂದು ಉದಾಹರಣೆ. ಕೆಲವು ವೇಳೆ ಅರಣ್ಯದಿಂದ ಆನೆಯ ಹಿಂಡು ಹಳ್ಳಿಯ ಪ್ರದೇಶಗಳಿಗೆ ನುಗ್ಗಿ ಬತ್ತ, ಕಬ್ಬು ಮುಂತಾದ ಬೆಳೆಗಳನ್ನು ನಷ್ಟಪಡಿಸುತ್ತದೆ.

	ಗಿಳಿಗಳು ಮತ್ತು ಇತರ ಹಕ್ಕಿಗಳು ಮರಗಳಲ್ಲಿರುವ ಹಣ್ಣುಗಳನ್ನು ತಿಂದು ನಷ್ಟವುಂಟು ಮಾಡುತ್ತವೆ. ಬತ್ತದ ತೆನೆಯಲ್ಲಿ ಹಾಲು ಕೂಡಿದಾಗ ಹಾಲು ಹಕ್ಕಿಗಳು ತೆನೆಯಿಂದ ಹಾಲು ಹೀರಿ ಬೆಳೆಯನ್ನು ಹಾಳು ಮಾಡುತ್ತವೆ.

	ಕೀಟಗಳಿಂದ ಆಗುವ ನಷ್ಟ ಅಗಾಧವಾಗಿದೆ. ಕೆಲವು ವೇಳೆ ಕೋಟ್ಯಂತರ ಮಿಡತೆಗಳು ಹಾರಿಬಂದು ಸಾವಿರಾರು ಎಕರೆಗಳ ಗೋಧಿ ಮತ್ತು ಬತ್ತದ ಪೈರನ್ನು ತಿಂದು ಹಾಕುತ್ತವೆ. ಕೀಟಗಳು ಹುಟ್ಟಿಕೊಂಡು ಅವರೆ, ತೊಗರಿ ಮುಂತಾದ ಬೆಳೆಗಳಿಗೆ ಅಪಾರ ನಷ್ಟವುಂಟು ಮಾಡುತ್ತವೆ. ಕೀಟಗಳಿಂದ ಸಾಂಕ್ರಾಮಿಕ ರೋಗಗಳೂ ಹರಡುತ್ತವೆ.

	ಹೊರದೇಶದಿಂದ ಬಂದ ಸೈನಿಕರು ಒಂದು ದೇಶದ ಮೇಲೆ ದಾಳಿ ನಡೆಸಿದಾಗ, ಹಾಗೆಯೇ ದೇಶದಲ್ಲಿ ವ್ಯಾಪಕವಾಗಿ ಅಂತಃಕಲಹಗಳು ನಡೆದಾಗ ಪ್ರಾಣ, ಮಾನನಷ್ಟವಲ್ಲದೆ, ಆಸ್ತಿಪಾಸ್ತಿಗಳ, ಬೆಳೆಗಳ ನಷ್ಟ ಸಂಭವಿಸುತ್ತದೆ. ಈ ಷಡ್ಬಾಧೆಗಳಲ್ಲದೆ, ಬೆಂಕಿ, ಬಿರುಗಾಳಿ, ಭೂಕಂಪಗಳಿಂದಲೂ ಈತಿ ಬಾಧೆಗಳು ಉದ್ಭವಿಸುತ್ತವೆ.

	ಈ ಎಲ್ಲ ಬಗೆಯ ಈತಿ ಬಾಧೆಗಳಿಂದ ಉಂಟಾಗುವ ನಷ್ಟವನ್ನು ತಡೆಗಟ್ಟುವುದು ದೇಶದ ಜನ ಮತ್ತು ಸರ್ಕಾರಗಳ ಜವಾಬ್ದಾರಿಯಾಗುತ್ತದೆ. ಪ್ರಾಕೃತಿಕವಾಗಿ ಒದಗುವ ಈತಿ ಬಾಧೆಗಳನ್ನು ಸರ್ಕಾರದ ನೆರವಿನಿಂದ ತಡೆಯಬಹುದು. ಜನಕ್ಕೆ ಸಂಬಂಧಿಸಿದ ಬಾಧೆಗಳನ್ನು ತಡೆಯಲು ಜನರೇ ವಿವೇಕದಿಂದ ನಡೆಯಬೇಕಾಗುತ್ತದೆ.
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ